ಉಡುಪಿ ಸೀರೆ

ಕರ್ನಾಟಕ ಕರಾವಳಿಯ ಉಡುಪಿ ಮತ್ತು ದ. ಕ ಜಿಲ್ಲೆಗಳಲ್ಲಿ ತಯಾರಾಗುವ ಶುದ್ಧ ಒಂದೆಳೆ ಹತ್ತಿಯ ಕೈ ಮಗ್ಗ ಸೀರೆಗಳನ್ನು ಉಡುಪಿ ಸೀರೆ ಎಂದು ಕರೆಯಲಾಗುತ್ತದೆ.

ಈ ಸೀರೆಯನ್ನು ಬಾಸೆಲ್ ಮಿಷನ್ ಪರಿಚಯಿಸಿದ ಮಲಬಾರ್ ಫ್ರೇಮ್ ಮಗ್ಗದಲ್ಲಿ ಚೌಕುಳಿ ಅಥವಾ ಸಾದಾ ವಿನ್ಯಾಸದಲ್ಲಿ ಒಂದೆಳೆಯ ಹತ್ತಿಯ ನೂಲನ್ನು ಬಳಸಿ ನೇಯಲಾಗುತ್ತದೆ. ಸೀರೆಯ ಸೆರಗು ಮತ್ತು ಅಂಚು ಗಾಢ ಬಣ್ಣದಲ್ಲಿದ್ದು ಸೀರೆಯ ಮೈ ಬಣ್ಣ ತಿಳಿಯಾಗಿರುತ್ತದೆ. ಕೈಯಿಂದ ಅಡ್ಡ ನೂಲು ಹಾಯಿಸಿ ಬುಟ್ಟಾವನ್ನು ನೇಯುತ್ತಾರೆ. ಸೆರಗಿಗೆ ಗಾಢ ಬಣ್ಣ ಬರುವ ಹಾಗೆ ಹಾಸಿನ ನೂಲಿನ ಎಲ್ಲಾ( ಒಂದು ಹಾಸಿನಲ್ಲಿ 30-35 ಸೀರೆಗಳನ್ನು ತಯಾರಿಸಬಹುದು ) ಸೆರಗಿನ ಭಾಗಗಳನ್ನು ಮಾತ್ರ ಕಟ್ಟಿ ಬಣ್ಣದಲ್ಲಿ ಮುಳುಗಿಸುತ್ತಾರೆ. ಈ ರೀತಿ ಬಣ್ಣ ಹಾಕಿದ ಹಾಸನ್ನು ಮಗ್ಗಕ್ಕೆ ಜೋಡಿಸಿ ನಂತರ ಸೀರೆಗಳನ್ನು ನೇಯಲಾಗುತ್ತದೆ. ನೇಯುವ ಸಂದರ್ಭದಲ್ಲಿ ಬಗಿನೆ ಮರದ ಗರಿಯ ಭಾಗಗಳಿಂದ ಮಾಡಿದ ವಿಶೇಷ ಬ್ರಶ್ ಬಳಸಿ ಮಗ್ಗದ ಮೇಲೆ ನೇಯಲಿರುವ ನೂಲಿಗೆ ಗಂಜಿಯನ್ನು ಹಾಕಲಾಗುತ್ತದೆ.
ಈ ಸೀರೆ ತಯಾರಿಯ ವಿಶಿಷ್ಟ ತಂತ್ರಗಾರಿಕೆ ಮತ್ತು ವಿನ್ಯಾಸಕ್ಕಾಗಿ ಉಡುಪಿ ಸೀರೆಗೆ ಭೌ ಗೋಳಿಕ ಭಿನ್ನತೆ ಅಂಕಿತ, (GI Tag) 2016ರಲ್ಲಿ ಜಿ ಐ ಮಾನ್ಯತೆ ದೊರೆತಿದೆ.

ಸರಳ ವಿನ್ಯಾಸದ ಉಡುಪಿ ಸೀರೆಗಳು ಉಡಲು ಬಹಳ ಆರಾಮದಾಯಕವಾಗಿದ್ದು ಮನ ಸೆಳೆಯುವ ಬಣ್ಣದಿಂದ ಕೂಡಿರುತ್ತದೆ. ಬಹಳ ಬಾಳಿಕೆ ಇರುವ ಈ ಸೀರೆಗಳು ಎಷ್ಟೋ ಮನೆಗಳಲ್ಲಿ ತಾಯಿ, ಅಜ್ಜಿ ಯರಿಂದ ಬಳುವಳಿಯಾಗಿ ಬಂದಿರುತ್ತದೆ. ಈ ಸೀರೆಗಳನ್ನು ಉಟ್ಟ ನಂತರ, ಹಾಸುವ ಹೊದೆಯುವ ವಸ್ತ್ರವಾಗಿ , ಶಿಶುಗಳನ್ನು ಕಟ್ಟಿ ಮಲಗಿಸುವ ಬೆಚ್ಚನೇ ಹಚ್ಚಡ ವಾಗಿ ಕೊನೆಗೆ ಅಡಿಗೆ ಮನೆಯಲ್ಲಿ ಕೈ ವಸ್ತ್ರವಾಗಿ , ನೆಲ ಒರಸುವ ಬಟ್ಟೆಯಾಗಿ ಉಪಯೋಗಿಸಿ ಆ ಮೇಲೆ ಮಣ್ಣಿನಲ್ಲಿ ಮಣ್ಣಾಗಿ ಪರಿಸರಕ್ಕೆ ಯಾವುದೇ ದೊಡ್ಡ ಹಾನಿ ಮಾಡದೇ ಭೂಮಿಯಲ್ಲಿ ಸೇರಿ ಹೋಗುತ್ತದೆ.
ಈ ಸೀರೆಗಳನ್ನು ಹೆಚ್ಚಾಗಿ ಶೆಟ್ಟಿಗಾರರೆಂದು ಕರೆಯಲ್ಪಡುವ ಪದ್ಮಶಾಲಿ ಜನಾಂಗದವರು ಮತ್ತು ಇತರ ಜನಾಂಗದವರು ನೇಯುತ್ತಾರೆ. ಮಹಾತ್ಮಾ ಗಾಂಧೀಯವರ ನೇತೃತ್ವ ದಲ್ಲಿ ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಖಾದಿ, ಕೈ ಮಗ್ಗ ಬಟ್ಟೆಗಳು ಮುನ್ನೆಲೆಗೆ ಬಂದಾಗ ಈ ಕಸುಬಿಗೆ ಬಹಳ ಪ್ರಾಮುಖ್ಯತೆ ಬಂತು.

ಉಭಯ ಜಿಲ್ಲೆಗಳಲ್ಲಿ ಹಿಂದೆ ಐದು ಸಾವಿರಕ್ಕೂ ಹೆಚ್ಚು ಕುಟುಂಬಗಳು ಈ ಗ್ರಾಮದ್ಯೋಗವನ್ನೇ ನೆಚ್ಚಿಕೊಂಡಿದ್ದವು ಎಂಟು ಸುವ್ಯವಸ್ಥಿತ ಸಹಕಾರಿ ಸಂಘಗಳ ಮೂಲಕ ಈ ವ್ಯವಸ್ಥೆ ನಡೆಸಲ್ಪಡುತಿತ್ತು. ಆದರೆ ಈ ಉದ್ಯಮ ನಾನಾ ಕಾರಣಗಳಿಂದ ಕಳೆದ ಎರಡು ದಶಕಗಳಿಂದೀಚೆಗೆ ಅಳಿವಿನಂಚಿಗೆ ತಲುಪಿತ್ತು.

ಕದಿಕೆ ಟ್ರಸ್ಟ್ 2018 ರಲ್ಲಿ ಉಡುಪಿ ಸೀರೆ ಪುನಃಚೇತನ ತನದ ಕೆಲಸ ಆರಂಭಿಸಿದಾಗ ಸಂಗ್ರಹಿಸಿದ ಮಾಹಿತಿ ಪ್ರಕಾರ ಎರಡು ಜಿಲ್ಲೆಗಳಲ್ಲಿ ಕೇವಲ 45 ( ಉಡುಪಿ ಸೀರೆ – 42) ವಯಸ್ಸಾದ ನೇಕಾರರು ನೇಕಾರಿಕೆಯಲ್ಲಿ ಉಳಿದಿದ್ದರು. ಐವತ್ತರ ಕೆಳಗಿನ ಒಬ್ಬ ನೇಕಾರರೂ ಇರಲಿಲ್ಲ. ಈ ಹಿರಿಯರು ಕೇವಲ ತಮ್ಮ ವೃತ್ತಿಯ ಮೇಲಿನ ಪ್ರೀತಿಯಿಂದ ಕಾಯಕದಲ್ಲಿ ಉಳಿದಿದ್ದರೆ ಅವರ ಮಕ್ಕಳಾರೂ ನೇಕಾರಿಕೆ ಕಲಿತಿರಲಿಲ್ಲ. ಅನೇಕ ಕುಶಲ ನೇಕಾರರು ನೇಕಾರಿಕೆ ಬಿಟ್ಟು ಬೇರೆ ಕೆಲಸದಲ್ಲಿ ತೊಡಗಿದ್ದರು.

ಮಹಾತ್ಮ ಗಾಂಧಿಜಿಯವರ ಸಹಕಾರ ಚಳುವಳಿಯಿಂದ ಪ್ರೇರಿತರಾಗಿ ದ. ಕ. ಮತ್ತು ಉಡುಪಿ ಜಿಲ್ಲೆಗಳ ನೇಕಾರರು ತಮ್ಮದೇ ನೇಕಾರರ ಸಂಘಗಳನ್ನು ಸ್ಥಾಪಿಸಿ ಅದರ ಸದಸ್ಯರಾಗಿ ಕೆಲಸ ಮಾಡುತ್ತಿದ್ದರು. ಹೀಗೆ ಸ್ಥಾಪಿಸಿದ ಒಟ್ಟು ಎಂಟು ನೇಕಾರರ ಸಂಘದಲ್ಲಿ ಕೇವಲ 5 ನೇಕಾರರ ಸಂಘಗಳು ಮಾತ್ರ ಉಳಿದಿತ್ತು. ನೇಕಾರರಿಗೆ ನೇಕಾರರ ಸಂಘಗಳು ನೂಲನ್ನು ಒದಗಿಸಿ ಮೀಟರ್ ಒಂದಕ್ಕೆ 50- 55 ರೂ ನಂತೆ ಪಾವತಿಸುತ್ತಿದ್ದವು( 2018 ರಲ್ಲಿ ). ತಯಾರಾಗುತ್ತಿದ್ದ ಸ್ವಲ್ಪವೇ ಸೀರೆಗಳು ಕಡಿಮೆ ಬೆಲೆಗೆ ಮಾರಾಟ ( ₹ 600 ಕ್ಕಿಂತಲೂ ಕಡಿಮೆ ) ಆಗುತ್ತಿದ್ದವು.

ಉಡುಪಿ ಸೀರೆ ನೇಕಾರಿಕೆ ಅನೇಕ ಕುಶಲ ಸೂಕ್ಷ್ಮ ತಂತ್ರಗಳನ್ನು ಒಳಗೊಂಡಿದೆ. ಇನ್ನೂ ಹಿರಿಯ ನೇಕಾರರು ಕೆಲಸ ಮಾಡುತ್ತಿರುವಾಗಲೇ ಈ ವಿಶಿಷ್ಟ ನೇಕಾರಿಕಾ ವಿಧಾನವನ್ನು ಕಿರಿಯರಿಗೆ ದಾಟಿಸುವ ತುರ್ತು ಇತ್ತು. ಇಲ್ಲದಿದ್ದರೆ ಮತ್ತೆಂದೂ ಈ ವಿಧಾನವನ್ನು ಕಲಿಯುವ ಸಾಧ್ಯತೆ ಇಲ್ಲ. ಆದರೆ ಯಾರಿಗೂ ಇಲ್ಲಿ ನೇಕಾರಿಕೆ ಮುಂದುವರಿಯುವ ಭರವಸೆ ಉಳಿದಿರಲಿಲ್ಲ.

ಕೊನೆಗೆ ತಾಳಿಪಾಡಿ ನೇಕಾರರ ಸಂಘವನ್ನು ಕೇಂದ್ರವಾಗಿಟ್ಟುಕೊಂಡು ಉಡುಪಿ ಸೀರೆ ನೇಕಾರಿಕೆಯ ಉಳಿವಿಗಾಗಿ ಕದಿಕೆ ಟ್ರಸ್ಟ್ ಕೆಲಸ ಆರಂಭಿಸಿತು. ಆಗ ತಾಳಿಪಾಡಿ ನೇಕಾರರ ಸಂಘದಲ್ಲಿ ಇದ್ದ ಒಟ್ಟು ನೇಕಾರರ ಸಂಖ್ಯೆ 8.

ಉಡುಪಿ ಸೀರೆಗೆ ಮರುಚೇತರಿಕೆ ಕೊಡುವುದು ಅತ್ಯಂತ ಸವಾಲಿನ ಕೆಲಸ ಆಗಿತ್ತು. ಇಲ್ಲಿ ನೇಕಾರಿಕೆ ಮುಂದುವರಿಯ ಬೇಕಾದರೆ ಇರುವ ನೇಕಾರರನ್ನು ಉಳಿಸಿಕೊಂಡು ಬಿಟ್ಟು ಹೋದ ನೇಕಾರರು ಮತ್ತು ಯುವಕರು ನೇಕಾರಿಕೆಯ ಕಡೆಗೆ ಬರುವಂತೆ ಮಾಡಬೇಕಿತ್ತು. ಕಡಿಮೆ ಬೆಲೆಗೆ ಮಾರಾಟವಾಗುತ್ತಿದ್ದ ಸೀರೆಗೆ ಯೋಗ್ಯ ಬೆಲೆಯೊಂದಿಗೆ ಒಳ್ಳೆಯ ಮಾರುಕಟ್ಟೆ ಒದಗಿಸಿ ನೇಕಾರರಿಗೆ ಉತ್ತಮ ಸಂಭಾವನೆ ದೊರಕಿಸಬೇಕಿತ್ತು. ಉಡುಪಿ ಸೀರೆಯ ಬಗ್ಗೆ ಜನರಲ್ಲಿ ಪ್ರೀತಿ, ಹಾಗೆಯೇ ನೇಕಾರಿಕಾ ವೃತ್ತಿಯ ಬಗ್ಗೆ ಗೌರವ..ನೇಕಾರರಲ್ಲಿ ಅಭಿಮಾನ ಮೂಡಿಸಬೇಕಿತ್ತು.

ಈ ಎಲ್ಲಾ ಸವಾಲಿನೊಂದಿಗೆ ಬಹು ಆಯಾಮದಲ್ಲಿ ಕದಿಕೆ ಟ್ರಸ್ಟ್ ಕೆಲಸ ಆರಂಭಿಸಿತು.

ಮೊದಲಿಗೆ ಸಾವಯವ ಸಂತೆ, ವಸ್ತು ಪ್ರದರ್ಶನ, ಮೇಳ, ಸಾಹಿತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಉಡುಪಿ ಸೀರೆಯ ಮರು ಪರಿಚಯ ಮಾಡಲಾಯಿತು. ಬೇರೆ ಬೇರೆ ಕಾರ್ಯಕ್ರಮಗಳಲ್ಲಿ,ಸಾಮಾಜಿಕ ಜಾಲತಾಣಗಳಲ್ಲಿ ಉಡುಪಿ ಸೀರೆ, ನೇಕಾರಿಕೆಯ ಮಹತ್ವದ ಬಗ್ಗೆ ಮಾಹಿತಿ ನೀಡಲಾಯಿತು.ಆಸಕ್ತಿ ತೋರಿಸಿದ ದೂರದೂರಿನ ಗ್ರಾಹಕರೊಂದಿಗೆ ನಿರಂತರ ಸಂವಹನ ನಡೆಸಿ ಹಾಗೆಯೇ ವಾಟ್ಸಪ್ ಗುಂಪುಗಳನ್ನು ಮಾಡಿ ನೇಕಾರರ ಸಂಘದಿಂದ ನೇರವಾಗಿ ಸೀರೆಗಳು ದೇಶದ ನಾನಾ ಭಾಗಗಳಿಗೆ ಹಾಗೆಯೇ ವಿದೇಶಗಳಿಗೂ ತಲುಪುವ ವ್ಯವಸ್ಥೆ ಮಾಡಲಾಯಿತು.

ಉಡುಪಿ ಸೀರೆಗೆ ಬ್ರಾಂಡ್ ಮೌಲ್ಯ ನೀಡಲು ಟ್ರಸ್ಟ್ ಮೂಲಕ ತಾಳಿಪಾಡಿ ಸಂಘದಲ್ಲಿ ತಯಾರಾಗುವ ಸೀರೆಗಳಿಗೆ ಚಂದದ ಲೋಗೋ ಮತ್ತು ಲೇಬಲ್ ಅನ್ನು ರಚಿಸಲಾಯಿತು. ಲೇಬಲ್ ನಲ್ಲಿ ನೇಕಾರರ ಚಿತ್ರವನ್ನು ಮುದ್ರಿಸಿ ಗ್ರಾಹಕರಿಗೆ ತಮ್ಮ ಸೀರೆಯ ಹಿಂದೆ ಇರುವ ಕೈಗಳನ್ನು ಪರಿಚಯಿಸಲಾಯಿತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ದೊರಕಿದೆ. ಈಗ ಇತರ ನೇಕಾರರ ಸಂಘಗಳು ಕೂಡಾ ಸೀರೆಗಳ ಜೊತೆಗೆ ನೇಕಾರರ ಪರಿಚಯ ನೀಡುತ್ತಿದೆ.

ಉಡುಪಿ ಸೀರೆಗೆ ಉತ್ತಮ ಬೇಡಿಕೆ ಹಾಗೂ ಬೆಲೆ ನೇಕಾರರ ಸಂಘಗಳಿಗೆ ದೊರೆತು ನೇಕಾರರ ಸಂಭಾವನೆ ಹೆಚ್ಚಾಗಿದೆ. ಅನೇಕ ವರುಷಗಳ ನಂತರ ಮತ್ತೆ ನೇಕಾರರಿಗೆ ಬೋನಸ್ ಕೂಡಲು ಆರಂಭಿಸಿದ್ದಾರೆ.

ನೇಕಾರರ ಕೊಡುಗೆಯನ್ನು ಗುರುತಿಸಲು ಎರಡೂ ಜಿಲ್ಲೆಯ ನೇಕಾರರಿಗೆ ಪ್ರಶಸ್ತಿ, ಸನ್ಮಾನ ಇತ್ಯಾದಿ ಕಾರ್ಯಕ್ರಮಗಳನ್ನು ಕದಿಕೆ ಟ್ರಸ್ಟ್ ಹಮ್ಮಿಕೊಂಡಿತು . ಹಾಗೆಯೇ ಅನೇಕ ಸಂಘ ಸಂಸ್ಥೆಗಳು ಉಡುಪಿ ಸೀರೆ ನೇಕಾರರನ್ನು ಗುರುತಿಸಿ ಗೌರವಿಸಲು ಶಿಫಾರಸು ಮಾಡಲಾಯಿತು . ಟ್ರಸ್ಟ್ ಶಿಫಾರಸಿನ ಮೇಲೆ ಒಬ್ಬ ನೇಕಾರಿಗೆ ರಾಷ್ಟ್ರ ಮಟ್ಟದ ಪ್ರಶಸ್ತಿ ಕೂಡಾ ಲಭಿಸಿದೆ. ಪತ್ರಿಕೆಗಳಿಗೆ ಮಾಹಿತಿ ನೀಡಿ ಉಡುಪಿ ಸೀರೆಗಳ ಬಗ್ಗೆ ನೇಕಾರರ ಕುರಿತು ಅನೇಕ ಲೇಖನಗಳು ಬರುವ ಹಾಗೇ ನೋಡಿಕೊಂಡೆವು. ಈ ಎಲ್ಲಾ ಪ್ರಯತ್ನದ ಫಲವಾಗಿ ನೇಕಾರರಿಗೆ ಸ್ಥಳೀಯ ಸಮಾಜದಲ್ಲಿ ಮಾನ್ಯತೆ ಹೆಚ್ಚಿದೆ. ಈಗ ಅನೇಕ ಸಂಸ್ಥೆಗಳು ನೇಕಾರರನ್ನು ಗುರುತಿಸಿ ಗೌರವಿಸುವ ಕೆಲಸ ಮಾಡುತ್ತಿವೆ.

ಕದಿಕೆ ಟ್ರಸ್ಟ್ ನೇಕಾರರ ಆತ್ಮೀಯ ಬಂಧುವಿನಂತೆ ಅವರ ಸಮಸ್ಯೆಗಳಿಗೆ ಸ್ಪಂದಿಸಿದೆ. ಅನೇಕ ನೇಕಾರರಿಗೆ ಸಣ್ಣ ಪುಟ್ಟ ಖಾಯಿಲೆ ಬಂದಾಗ ಹಾಗೂ 9 ಮಂದಿಗೆ ಸರ್ಜರಿ ಸಂದರ್ಭದಲ್ಲಿ ನೆರವು ನೀಡಿದೆ. ನೇಕಾರಿಗೆ ಶೆಡ್ ನಿರ್ಮಿಸಲು ಹಾಗೆಯೇ ಕೋವಿಡ್ ಹಾಗೂ ಪರಿಸರ ವಿಕೋಪ ಸಂದರ್ಭದಲ್ಲಿ ಸಹಾಯ ಮಾಡಿದೆ. 50 ಕ್ಕಿಂತಲೂ ಹೆಚ್ಚು ನೇಕಾರರು ಮತ್ತು ಸಹಾಯಕರಿಗೆ ವಿಶೇಷ ಗೌರವಧನ ನೀಡಿದೆ. 10 ಮಗ್ಗಗಳನ್ನು ತಾಳಿಪಾಡಿ ನೇಕಾರರ ಸಂಘದಲ್ಲಿ ತರಬೇತಿಗೆ ಇಡಲಾಗಿದೆ. ನೇಕಾರರ ಪರವಾಗಿ ಬೇರೆ ಬೇರೆ ಇಲಾಖೆಗಳ ಜೊತೆಗೆ ಸಂವಹನ ನಡೆಸಿ ನೇಕಾರರಿಗೆ ವಿವಿಧ ಸೌಲಭ್ಯ ದೊರಕಿಸುವ ಪ್ರಯತ್ನ ಮಾಡುತ್ತಿದೆ. 20 ಮಂದಿ ನೇಕಾರರಿಗೆ ಬೆಂಬಲ ವೇತನ ನೀಡುತ್ತಿದೆ.
ಈ ಎಲ್ಲಾ ಉಪಕ್ರಮಗಳು ನೇಕಾರರಲ್ಲಿ ಭರವಸೆ ಮೂಡಿಸುವಲ್ಲಿ ಯಶಸ್ವಿಯಾಗಿದೆ.

ಕದಿಕೆ ಟ್ರಸ್ಟ್, ತಾಳಿಪಾಡಿ ಸಂಘದ ಜೊತೆ ಸೇರಿ ಅನೇಕ ಬಿಟ್ಟು ಹೋದ ನೇಕಾರರು ಮತ್ತೇ ನೇಕಾರಿಕೆಗೆ ಬರುವಂತೆ ಮಾಡಿದೆ. ಟ್ರಸ್ಟ್, ನಬಾರ್ಡ್ ಸಂಸ್ಥೆಯ ನೆರವಿನಿಂದ ನೇಕಾರಿಕಾ ತರಬೇತಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದೆ. 2018 ರಲ್ಲಿ ತಾಳಿಪಾಡಿ ಸಂಘದಲ್ಲಿ 8 ಇದ್ದ ನೇಕಾರರ ಸಂಖ್ಯೆ ಈಗ 34ಕ್ಕೆ ಏರಿದೆ. ಎರಡು ಜಿಲ್ಲೆಗಳಲ್ಲಿ 45 ರಷ್ಟು ಇದ್ದ ನೇಕಾರರ ಸಂಖ್ಯೆ 72 ಕ್ಕೆ ಏರಿದೆ. ಇದರಲ್ಲಿ 13 ಮಂದಿ 50 ವರುಷಕ್ಕಿಂತಲೂ ಕೆಳಗಿನವರು. ಅತ್ಯಂತ ಕಿರಿಯ ನೇಕಾರರ ವಯಸ್ಸು 30. ಮೂರು ದಶಕಗಳ ನಂತರ ಯುವ ನೇಕಾರರು ನೇಕಾರಿಕೆಯಲ್ಲಿ ಪ್ರೀತಿಯಿಂದ ತೊಡಗಿದ್ದಾರೆ. ತರಬೇತಿ ಮುಗಿದಿದ್ದರೂ ಕದಿಕೆ ಟ್ರಸ್ಟ್ ಹೊಸ ನೇಕಾರರಿಗೆ ಬೆಂಬಲ ವೇತನ ನೀಡಿ ಅವರು ನೇಕಾರಿಕೆಯಲ್ಲಿ ಮುಂದುವರಿಯುವಂತೆ ನೋಡುತ್ತಿದೆ. ಈ ಹೊಸ ನೇಕಾರರು ಉಡುಪಿ ಸೀರೆ ನೇಕಾರಿಕೆ ಮುಂದುವರಿಸುವ ಭರವಸೆ ಮೂಡಿಸಿದ್ದಾರೆ.

ಉಡುಪಿ ಸೀರೆಗಳನ್ನು ಪರಿಸರ ಸ್ನೇಹಿಯಾಗಿಸಲು ಆರಂಭದಲ್ಲಿ ಚರಕ ಸಂಸ್ಥೆಯ ಸಹಕಾರದೊಂದಿಗೆ ಮುಂದೆ ಕಾಮನಬಿಲ್ಲು ಸಂಸ್ಥೆಯ ಮೂಲಕ ಸಹಜ ಬಣ್ಣದ ಉಡುಪಿ ಸೀರೆಯನ್ನು ತಾಳಿಪಾಡಿ ಸಂಘದಲ್ಲಿ ಪರಿಚಯಿಸಲಾಯಿತು. ಸಹಜ ಉಡುಪಿ ಸೀರೆಗಳಿಗೆ ಗ್ರಾಹಕರಿಂದ ಒಳ್ಳೆಯ ಸ್ಪಂದನೆ ದೊರೆತಿದೆ. ಎರಡು ಸಹಜ ಬಣ್ಣದ ಕಾರ್ಯಗಾರವನ್ನು ತಾಳಿಪಾಡಿ ಸಂಘದಲ್ಲಿ ಆಯೋಜಿಸಲಾಗಿದೆ. ಈಗ ಸೆಲ್ಕೋ ಫೌಂಡೇಶನ್ ನೆರವಿನಿಂದ ಪೂರ್ಣ ಪ್ರಮಾಣದಲ್ಲಿ ಸೌರ ಶಕ್ತಿಯಿಂದ ನಡೆಯುವ ಸಹಜ ಬಣ್ಣದ ಘಟಕವನ್ನು ತಾಳಿಪಾಡಿ ಸಂಘದಲ್ಲಿ ಸ್ಥಾಪಿಸಲಾಗಿದೆ.
ಕದಿಕೆ ಟ್ರಸ್ಟ್ ಯಾವುದೇ ಫಲಾಪೇಕ್ಷೆ ಇಲ್ಲದೆ ತನ್ನ ಧ್ಯೇಯೋದ್ದೇಶಗಳಲ್ಲಿ ಒಂದಾದ ಅಳಿವಿನಂಚಿನಲ್ಲಿರುವ ಪರಿಸರ ಸ್ನೇಹಿ ಗ್ರಾಮೋದ್ಯೋಗಗಳನ್ನು ಉಳಿಸುವ ಉದ್ದೇಶದಿಂದ ನೇಕಾರರಿಗೆ ಮತ್ತು ನೇಕಾರ ರ ಸಂಘಗಳಿಗೆ ಸಹಾಯ ಮಾಡುತ್ತಿದೆ. ನಿರಂತರ ಪ್ರಯತ್ನದ ನಂತರ ಉಡುಪಿ ಸೀರೆ ನೇಕಾರಿಕೆ ಮತ್ತೇ ಚೇತರಿಸಿಕೊಳ್ಳುವ ಭರವಸೆ ಮೂಡಿದೆ. ಈ ಪುನಶ್ಚೇತನದ ಕಾರ್ಯದಲ್ಲಿ ಅನೇಕರು ನೆರವು ನೀಡಿದ್ದಾರೆ. 

 

ಕೆಲವು ಸ್ವಯಂ ಪ್ರೇರಿತ ದಾನಿಗಳು ತಾವಾಗೇ ಮುಂದೆ ಬಂದು ಕೆಲವೊಂದು ಉದ್ದೇಶಗಳಿಗೆ ನೆರವು ನೀಡಿದ್ದಾರೆ. ಅನೇಕ ಗ್ರಾಹಕರು ಉಡುಪಿ ಸೀರೆ ಖರೀದಿಸಿ, ಉಡುಗೊರೆ ನೀಡಿ, ಸಾಮಾಜಿಕ ಜಾಲತಾಣಗಳಲ್ಲಿ ಬರೆದು ಪ್ರಚಾರ ನೀಡಿದ್ದಾರೆ. ನಬಾರ್ಡ್ ಸಂಸ್ಥೆಯಂತೂ ಕೆಲವು ಯೋಜನೆಗಳಿಗೆ ನೆರವು ನೀಡುವುದರ ಜೊತೆಗೆ ಕದಿಕೆ ಟ್ರಸ್ಟ್ ನ ಕೈ ಮಗ್ಗ ಕ್ಷೇತ್ರದಲ್ಲಿನ ಕೆಲಸಕ್ಕಾಗಿ 2021ರಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ನೀಡಿದೆ.

ಕದಿಕೆ ಟ್ರಸ್ಟ್ ಆಶಿಸಿದ ಹಾಗೇ ಉಡುಪಿ ಸೀರೆಗೆ ರಾಷ್ಟ್ರ ಮಟ್ಟದಲ್ಲಿ ಮಾನ್ಯತೆ ದೊರಕಿದೆ. ಉಡುಪಿ ಸೀರೆ ನೇಕಾರರ ಸಂಭಾವನೆ – ವೃತ್ತಿ ಗೌರವ ಹೆಚ್ಚಿದೆ. ನೇಕಾರರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಉಡುಪಿ ಸೀರೆ ಉಡುವುದು ಈಗ ಟ್ರೆಂಡ್ ಆಗಿದೆ. ಸ್ಥಳೀಯರೂ ಅಭಿಮಾನದಿಂದ ಉಡುಪಿ ಸೀರೆ ತೊಡಲು ಆರಂಭಿಸಿದ್ದಾರೆ. ಅಳಿವಿನoಚಿನಲ್ಲಿದ್ದ ಉಡುಪಿ ಸೀರೆ ಪುನಸ್ಚೇತನದ ಕಾರ್ಯ ಯಶಸ್ವಿಯಾಗಿದೆ.ಈಗ ಅನೇಕ ಸಂಘ ಸಂಸ್ಥೆಗಳು, ಸ್ಥಳೀಯರು ಉಡುಪಿ ಸೀರೆ ನೇಕಾರಿಕೆ ಮತ್ತು ನೇಕಾರರನ್ನು ಗುರುತಿಸುವ ಕೆಲಸ ಆರಂಭಿಸಿವೆ.

ಹವಾಮಾನ ಬದಲಾವಣೆಯ ಪರಿಣಾಮದ ತೀವ್ರತೆ ಕಡಿಮೆ ಮಾಡಲು ಉಡುಪಿ ಸೀರೆಯಂತಹ ಕೈಯಿಂದ ತಯಾರಿಸಿದ ಉತ್ಪನ್ನಗಳನ್ನು ಹೆಚ್ಚು ಹೆಚ್ಚು ಬಳಕೆ ಮಾಡಬೇಕು. ಕೈ ಉತ್ಪನ್ನಗಳ ತಯಾರಿಯಲ್ಲಿ ತೊಡಗಿರುವ ಕುಶಲ ಕರ್ಮಿಗಳಿಗೆ ಗೌರವದ ವೇತನ ದೊರಕುವ ಹಾಗೇ ಮಾಡಿ ಅವರು ವೃತ್ತಿಯಲ್ಲಿ ಮುಂದುವರಿಯುವಂತೆ ನೋಡುವುದು ಸಮಾಜದ ಕರ್ತವ್ಯವಾಗಿದೆ.

ಉಡುಪಿ ಸೀರೆಯಂತಹ ಪರಿಸರ ಸ್ನೇಹಿ ಗ್ರಾಮೋದ್ಯೋಗವನ್ನು ಬೆಂಬಲಿಸಿ , ಪ್ರೋತ್ಸಾಹಿಸುವುದು ನಾಗರಿಕ ಜಗತ್ತಿನ ಕರ್ತವ್ಯವಾಗಿದೆ